ದತ್ತಾತ್ರೇಯ, ಎಚ್ ಜಿ 
(1942- ). ಕನ್ನಡ ಹವ್ಯಾಸಿ ರಂಗಭೂಮಿ, ಚಲನಚಿತ್ರ ಮತ್ತು ಕಿರುತರೆಯ ಪ್ರಬುದ್ಧ ಕಲಾವಿದ. ಅಭಿನಯಿಸಿದ ಮೊದಲ ಚಿತ್ರ ಆಸ್ಫೋಟ (1987)ದಲ್ಲಿಯೇ ಪ್ರೇಕ್ಷಕರ ಮನಗೆದ್ದು ರಾಜ್ಯ ಪ್ರಶಸ್ತಿ ಪಡೆದ ಪ್ರತಿಭಾವಂತ. ಹುಟ್ಟಿದ್ದು ಚಿತ್ರದುರ್ಗದಲ್ಲಿ 1942 ಎಪ್ರಿಲ್ 20ರಂದು. ತಂದೆ ಹರಿಹರ ಗುಂಡೂರಾವ್ ಮತ್ತು ತಾಯಿ ವೆಂಕಮ್ಮ. ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಣೆ. ಪ್ರೌಢಶಾಲೆಯಲ್ಲಿದ್ದಾಗ ಅಭಿನಯಿಸಿದ ಮೊದಲ ನಾಟಕ ಅಳಿಯ ದೇವರು (1956) ಆ ನಂಟೂ ಇಂದಿಗೂ ಬೆಸೆದುಗೊಂಡಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಎಂ.ಇ. ಪದವಿಧರ. ಭಾರತೀಯ ವಿಮಾನದಳದಲ್ಲಿ ವಿಂಗ್ ಕಮಾಂಡರ್ ಆಗಿ 21 ವರ್ಷ ಸೇವೆ. ನಂತರ ಎಂಟು ವರ್ಷಗಳು ಹಿಂದೂಸ್ಥಾನ್ ವಿಮಾನ ಕಾರ್ಖಾನೆಯಲ್ಲಿ ಹಿರಿಯ ಅಧಿಕಾರಿ ಹಾಗೂ ಎಚ್.ಎ.ಎಲ್. ಸ್ಟಾಫ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ. ಟಿ.ಎಸ್.ರಂಗಾರ ಉದ್ಭವ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, ಅದೇ ಕಾಲಕ್ಕೆ ನಾಗಾಭರಣರ `ಆಸ್ಫೋಟ' ಚಿತ್ರದಲ್ಲಿ ಪರಿಣಾಮಕಾರಿ ಪಾತ್ರವೊಂದರ ನಿರ್ವಹಣೆ. ದತ್ತಾತ್ರೆಯ ವಾಣಿಜ್ಯ ಚಿತ್ರಗಳು ಹಾಗೂ ಹೊಸ ಅಲೆಯ ಚಿತ್ರಗಳು-ಎರಡೂ ಪ್ರಕಾರಗಳಲ್ಲೂ ಅಭಿನಯಿಸಿದ ಅನುಭವಿ ನಟ. ಅಭಿನಯಿಸಿದ ಚಿತ್ರಗಳು ಬಹುತೇಕ ಒಂದಲ್ಲ ಒಂದು ಪ್ರಶಸ್ತಿಗೆ ಪಾತ್ರವಾದವು. ಹರಕೆಯಕುರಿ, ಕೊಟ್ರೇಶಿ ಕನಸು, ಬೇರು, ತುತ್ತೂರಿ, ಚಿನ್ನಾರಿಮುತ್ತ, ಹೂಮಳೆ, ಅಮೆರಿಕಾ ಅಮೆರಿಕಾ, ಅತಿಥಿ, ಚೈತ್ರದ ಚಿಗುರು, ತಿಲದಾನಂ (ತೆಲುಗು), ಕ್ರೌರ್ಯ ಇವು ದತ್ತಾತ್ರೆಯ ಅಭಿನಯಿಸಿದ ಅರ್ಥಪೂರ್ಣಚಿತ್ರಗಳಲ್ಲಿ ಕೆಲವು. ಸಂಸಾರ ತಾಪತ್ರಯಗಳಿಂದ ದೂರವಾದ ಏಕಾಂಗಿ ಜೀವಿ. ಅಣ್ಣ ಎಚ್.ಜಿ.ಸೋಮಶೇಖರರಾವ್ ಕೆನರಾ ಬ್ಯಾಂಕ್‍ನಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರು. ರಂಗಭೂಮಿ ಹಾಗೂ ಚಲನಚಿತ್ರ ರಂಗಗಳೆರಡರಲ್ಲಿಯೂ ಜನಪ್ರಿಯರಾದ ನಟರು.

ದತ್ತಣ್ಣ ಅಭಿನಯಿಸಿದ ಪ್ರಥಮ ಚಿತ್ರವಾದ `ಆಸ್ಫೋಟ'ದಲ್ಲಿನ ಅಭಿನಯಕ್ಕಾಗಿ 1987-88ರ ಶ್ರೇಷ್ಠ ಪೋಷಕ ನಟ ಪ್ರಶಸ್ತಿಯನ್ನು, ಪಿ.ಶೇಷಾದ್ರಿಯವರ ಮುನ್ನುಡಿ ಚಿತ್ರದಲ್ಲಿನ ಅಭಿನಯಕ್ಕಾಗಿ 2000-01ರ ಶ್ರೇಷ್ಠ ನಟ ಪ್ರಶಸ್ತಿಯನ್ನೂ ರಾಜ್ಯ ಸರ್ಕಾರದಿಂದ ಪಡೆದಿದ್ದಾರೆ. ಹಾಗೆಯೇ ಮುನ್ನುಡಿ ಚಿತ್ರದ ಅಭಿನಯಕ್ಕಾಗಿ ಕೇಂದ್ರ ಸರ್ಕಾರದಿಂದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ (2000) ಮತ್ತು ಮೌನಿ (2004) (ನಿರ್ದೇಶನ: ಲಿಂಗದೇವರು) ಚಿತ್ರದ ಅಭಿನಯಕ್ಕಾಗಿ ರಾಷ್ಟ್ರೀಯ ತೀರ್ಪುಗಾರರ ವಿಶೇಷ ಮೆಚ್ಚುಗೆಯ ಪ್ರಶಸ್ತಿ ಪಡೆದಿದ್ದಾರೆ. ಕಿರುತೆರೆಯಲ್ಲಿ ಎಂ.ಎಸ್.ರಾಮಯ್ಯ ಕಮ್ಯೂನಿಕೇಷನ್ಸ್ ಅವರ ``ಸೃಷ್ಟಿ (ನಿರ್ದೇಶನ: ರವೀ), ಟಿ.ಎನ್.ಸೀತಾರಾಂರ ಮಾಯಾಮೃಗ ಜಿ.ವಿ.ಅಯ್ಯರ್‍ರವರ ಅದೃಷ್ಟದ ಹೋರಾಟ ಹಾಗೂ ಶಾಂತಲಾ ಧಾರವಾಹಿಗಳಲ್ಲಿನ ದತ್ತಾತ್ರೆಯ ಅವರ ಅಭಿನಯ ಅವಿಸ್ಮರಣೀಯ.

ಸುಮಾರು 80 ಚಲನಚಿತ್ರಗಳು, 40 ನಾಟಕಗಳು ಮತ್ತು ಅನೇಕ ಧಾರವಾಹಿ, ಕಿರುಚಿತ್ರ, ಸಾಕ್ಷ್ಯಚಿತ್ರಗಳು ಹಾಗೂ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ದತ್ತಣ್ಣ ಈ ಎಲ್ಲ ಕ್ಷೇತ್ರಗಳಲ್ಲಿ ಇಂದಿಗೂ ಕಾರ್ಯಪ್ರವರ್ತರಾಗಿದ್ದಾರೆ. ವಿಮಾನದಳ, ಹಿಂದೂಸ್ಥಾನ ವಿಮಾನ ಕಾರ್ಖಾನೆ ಉದ್ಯೋಗದಲ್ಲಿದ್ದಾಗಲೂ ದತ್ತಣ್ಣ ಅವರ ಮೊದಲ ಒಲವು ರಂಗಭೂಮಿ.
ದೆಹಲಿಯ ಕನ್ನಡಭಾರತೀ, ಬೆಂಗಳೂರಿನ ಸಮುದಾಯ, ಕಲಾಗಂಗೋತ್ರಿ ವೇದಿಕೆ, ದಕ್ಷಿಣೇ, ಗೆಳೇಯರ ಬಳಗ ಇತ್ಯಾದಿ ತಂಡಗಳಲ್ಲಿ ಅಭಿನಯಿಸಿರುವ ದತ್ತಣ್ಣ ಅವರ ನಾನೇಬಿಜ್ಜಳ, ಹಿಟ್ಟಿನಹುಂಜ (ನಿ: ಪ್ರಭಾಕರರಾವ್), ಈ ಮುಖದವರು (ನಿ: ಸೂರಿ), ನಹಿನಹಿರಕ್ಷತಿ (ನಿ: ಬಿ.ವಿ.ಕಾರಂತ), ಕುರುಕ್ಷೇತ್ರದಿಂದ ಕಾರ್ಗಿಲ್‍ವರೆಗೆ, ತೋಟದಮನೆ (ನಿ: ಎಂ.ಎಸ್.ಸತ್ಯು), ಪುರುಷ್, ಸಯನಾರಾ (ನಿ: ಡಾ.ಬಿ.ವಿ.ರಾಜಾರಾಂ), ಹಾವು-ಏಣಿ (ನಿ: ಸಿ.ಆರ್.ಸಿಂಹ), ಸಂಕ್ರಾಂತಿ (ನಿ: ಬಸು), ರುಡಾಲಿ (ನಿ: ಸಿ.ಜಿ.ಕೆ). ಸಾತ್ರ್ರೆ ಅವರ `ರೆಸ್ಪೆಕ್ಟ್‍ಫುಲ್ ಪ್ರಾಸ್ಟಿಟ್ಯೂಟ್ ಇಂಗ್ಲಿಷ್ ನಾಟಕ (ನಿ: ನರೇಶ್), ರಕ್ತ ಕಲ್ಯಾಣ್ ಹಿಂದಿ ನಾಟಕ (ನಿ: ಆರ್. ನಾಗೇಶ್)-ಇವೇ ಮೊದಲಾದ ಹವ್ಯಾಸಿ ರಂಗಭೂಮಿಯಲ್ಲಿ ಮೈಲಿಗಲ್ಲೆನಿಸಿದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಾನೇ ಬಿಜ್ಜಳ ನಾಟಕದ ಮೊದಲ ಪ್ರದರ್ಶನ ನಡೆದದ್ದು ದೆಹಲಿಯಲ್ಲಿ. ನಾಟಕಕಾರ ಜಡಭರತರಿಗಾಗಿಯೇ ಮತ್ತೊಮ್ಮೆ ದೆಹಲಿಯಲ್ಲಿ ವಿಶೇಷ ಪ್ರದರ್ಶನ. ಬಿಜ್ಜಳನ ಪಾತ್ರಧಾರಿ ದತ್ತಾತ್ರೇಯ, ಬಿಜ್ಜಳನ ಪಾತ್ರ ನೋಡಿ ಪ್ರಭಾವಿತರಾದ ಜಡಭರತ `ಈ ನಾಟಕವನ್ನು ನಾನು ನಿನಗಾಗಿಯೇ ರಚಿಸಿದಂತಿದೆ ಎಂದು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಇದೊಂದೇ ಪಾತ್ರವಲ್ಲ; ಚಲನಚಿತ್ರ, ಕಿರುತರೆ, ಎಲ್ಲದರಲ್ಲೂ ದತ್ತಣ್ಣ, ತನ್ಮಯತೆಯಿಂದ ಅಭಿನಯಿಸುತ್ತಾರೆ; ಪಾತ್ರಕ್ಕೆ ಜೀವ ತುಂಬುತ್ತಾರೆ. ಇಡೀ ಪ್ರದರ್ಶನವನ್ನು ಆವರಿಸಿ ಬಿಡುತ್ತಾರೆ. 2004ರ 51ನೆ ರಾಷ್ಟ್ರೀಯ ಚಲನಚಿತ್ರಪ್ರಶಸ್ತಿ ಪುರಸ್ಕಾರ ನಿರ್ಣಾಯಕ ಸಮಿತಿ ಸದಸ್ಯರು ಹೇಳಿದ್ದು ಇದೇ ಮಾತನ್ನೇ. 											(ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ